Wednesday, 21 October 2015

ಕವನ ಮತ್ತು ಅವಳು

ಬಲ್ಲ ಸ್ನೇಹಿತರೆಲ್ಲ ಮೆಲ್ಲ ಕೇಳುವರು
ಅವಳಿರುವಳೇ  ಇಲ್ಲಿ, ಈ ಕವನದಲ್ಲಿ
ಒಲ್ಲದೇ ಮೋರೆಯ  ಅತ್ತ ಹೊರಳಿಸಿದರು
ಮತ್ತದೇ ಪ್ರಶ್ನೆ
ಅವಳಿರುವಳೇ  ಇಲ್ಲಿ, ಈ ಕವನದಲ್ಲಿ

ಪದದಿ ಹರಿದಿದೆ ಒಲವು, ಎದ್ದು ಕಂಡಿದೆ ನೋವು
ಅವಳಿರುವಳೇ  ಇಲ್ಲಿ, ಈ ಕವನದಲ್ಲಿ
ಏನೋ ಇದೆ ಬದುಕಲ್ಲಿ, ನೀ ಅಡಿಯ ಇಡುವಲ್ಲಿ
ಅವಳಿರುವಳೇ  ಇಲ್ಲಿ, ಈ ಕವನದಲ್ಲಿ

ಯೋಚಿಸಿದೆ ನಾ ನಿಂತು, ಒಡನೆ ನೆನಪಿಗೆ ಬಂತು
ಇದ್ದರೂ ಇರಬಹುದು ನನ್ನ ಪದದಲ್ಲಿ
ಒಲವ ಹುಟ್ಟಿಸಿದವಳು, ಪ್ರೀತಿ ಉಕ್ಕಿಸಿದವಳು
ಇದ್ದರೂ ಇರಬಹುದು, ನನ್ನ ಪದದಲ್ಲಿ

ಸಂದಿಗ್ಧ ಪ್ರಶ್ನೆಯಿದು, ಉತ್ತರವು ಸಿಗದು
ಆದರೂ ಹೇಳುವೆ, ಮರುಪ್ರಶ್ನೆ ಸಲ್ಲದು
ಭಾವನೆಗಳ ಸಮ್ಮಿಳಿತದ ಏರಿಳಿತವೇ ಅವಳು
ಕವನದಲ್ಲಿ ಅವಳಿಲ್ಲ, ಕವನವೇ ಅವಳು
ಕವನದಲ್ಲಿ ಅವಳಿಲ್ಲ, ಕವನವೇ ಅವಳು

                                                --ಶಿವು

Thursday, 15 October 2015

ಕನಸು

ಕಹಿಯಾದ ಮನಸಿಗೆ ಸಿಹಿಯನ್ನು ಉಣಿಸದೆ
ಎಲ್ಲಿರುವೆ ಓ ಕನಸೆ ನೀನು..
ನೀ ಬರುವ ದಾರಿಯ ಇರುವಿಕೆಯ ಕಾಣದೆ
ಅಲೆದಿರುವ ಅಲೆಮಾರಿ ನಾನು..


ನಿದ್ದೆಯಲು ಅರಸಿರುವೆ, ಸ್ವಪ್ನವನೆ ಬಯಸಿರುವೆ
ದಯತೋರಿ ನೀನೊಮ್ಮೆ ಬರಲಾರೆಯ...
ಕಂಡು ಕಾಣದ ಹಾಗೆ ನೀನೆಲ್ಲಿ ನೆಲೆಸಿರುವೆ
ಕೈ ಮುಗಿವೆ ನನಗೊಮ್ಮೆ ಸಿಗಲಾರೆಯ...


ಶಬರಿಯ ಬದುಕಲ್ಲಿ ರಘುರಾಮನಾಗಿರುವೆ
ನನ ಮೇಲೆ ನಿನಗೇಕೆ ಇಂಥ ಮುನಿಸು...
ಗಾಢ ನಿದ್ದೆಯ ಹಾದಿ ನಿನಗಾಗಿ ತೊರೆದಿರುವೆ
ಕನವರಿಸಿ ಎದ್ದರೆ ನನ್ನ ಕ್ಷಮಿಸು...


ಪ್ರೇಮಲೋಕದ ಪಯಣ ಬೇಕಿಲ್ಲ ನನಗೆ
ಹುಡುಕುವೆ ನಿನ್ನನ್ನು ಕಣ್ಣ ಮುಚ್ಚಿ...
ಸ್ವಪ್ನಲೋಕದ ಸಣ್ಣ ಸುಳಿವು ಸಿಕ್ಕರು ಕೊನೆಗೆ
ಬೆನ್ನು ಹತ್ತುವೆ ನಿನ್ನ ಕದ್ದು ಮುಚ್ಚಿ...

                                 
                                         --ಶಿವು

Tuesday, 13 October 2015

ದೆವ್ವ

ಎಡವಿದೆನು ತಡರಾತ್ರಿ ಮಾರ್ಗ ಮಧ್ಯದಲಿ
ದೆವ್ವದ ಭಯವಿತ್ತು ದಾರಿಯಲ್ಲಿ
ಕೇಳಿತು ದೂರದಿ ಹೆಣ್ಣೊಂದು ಅತ್ತಂತೆ
ಕೂಗಿತು ನಾಯೊಂದು ಹುಚ್ಚು ಹಿಡಿದಂತೆ...


ಚದುರಿದ ಬೆಳಕಂತೆ ಹೆಣ್ಣೊಂದು ಓಡಿರಲು
ಅಮವಾಸ್ಯೆ ಕತ್ತಲಲಿ ಬಿರುಗಾಳಿ ಬೀಸಿರಲು
ಜನವರಿಯ ಚಳಿಯಲ್ಲು ಬೆವರಿಳಿಯುತಿರಲು
ಮೂಕವೇದನೆಯೊಂದು ಬಾ ಇಲ್ಲಿ ಎನಲು...


ಇಡಿ ಮೈಯು ಕಂಪಿಸಿತು ಮೇಲಿಂದ ಕೆಳಗೆ
ಸಾವೆನ್ನ ಕರೆದಾಗ ಬಾ ಎಂದು ಬಳಿಗೆ
ಮುಕ್ಕೋಟಿ ದೇವರು ಕಣ್ಮುಂದೆ ಬಂದರು
ನನ್ನ ಮೊರೆಯ ಕೇಳುವವರಾರು....?


ಕಣ್ಣು ಕಾಣಿಸದಂತೆ ತರಗೆಲೆಯು ಹಾರಿತ್ತು
ಅತೃಪ್ತ ಆತ್ಮವು ಬಳಿಸಾರಿ ಬಂದಿತ್ತು
ವೇದನೆಯ ರಾಗವು ಕಿವಿಯನ್ನು ತಟ್ಟಿತ್ತು
ಪಿಸುದನಿಯು ಜೋರಾಗಿ ಹೆಸರನ್ನು ಕೂಗಿತ್ತು


ಓಡದೇ ಬೇರೆಯ ಮಾರ್ಗವೇ ಇರಲಿಲ್ಲ
ಚಲಿಸುವ ಶಕ್ತಿಯು ದೇಹದಲ್ಲಿರಲಿಲ್ಲ
ಆಳಕ್ಕೆ ಬಿದ್ದಿರಲು ದುಸ್ವಪ್ನ ಮುಗಿದಿತ್ತು
ಕಣ್ತೆರೆದೆ ಚಡಪಡಿಸಿ ಬೆಳಕು ಹರಿದಿತ್ತು....



                                            -- ಶಿವು

Monday, 12 October 2015

ಹೇಳಿ ಹೋಗು ಕಾರಣ

ಭಾವನೆಯ ಬರೆದಿರುವೆ ಲೇಖನಿಯ ಎತ್ತದೆ
ಕಷ್ಟವನು ತಿಳಿಸಿರುವೆ ವೃತ್ತವನು ಸುತ್ತದೆ
ಅಂದು ಕಟ್ಟಿದೆ ನೀನು ನೆನಪಿನ ತೋರಣ
ದೂರವು ಇಂದೇಕೆ ಹೇಳಿ ಹೋಗು ಕಾರಣ...


ಕಲಿಸಿದೆ ಬದುಕಲು ನೀನು ಜೊತೆಯಿಲ್ಲದೆ
ಬದುಕಿದು ಸಾಧ್ಯವೇ ನಿನ್ನ ನೆನಪಿಲ್ಲದೆ
ನೀನಿರದ ದಾರಿಯಲಿ ಬದುಕ ಪಯಣ
ಕೇಳುತಿದೆ ನಿನ್ನನ್ನು ಹೇಳಿ ಹೋಗು ಕಾರಣ....


ನೀ ಹಾಕಿದ ಗೆರೆಯ ನಾನೆಂದು ದಾಟೆನು
ನಿನ್ನ ಹೆಸರಿನ ವಿನಹ ಬೇರೇನು ಕರೆಯೆನು
ಮನದ ಮರುಳಿಗೆ ನಾ ತಾನೆ ಕಾರಣ
ಮೌನವು ನಿನಗೇಕೆ ಹೇಳಿ ಹೋಗು ಕಾರಣ...


ನೋವಿನ ಲೆಕ್ಕದಲಿ ನಾ ಪಾಲು ಕೇಳುವೆ
ನಲಿವಿನ ವಿಷಯದಲ್ಲಿ ಎಲ್ಲವನು ನೀಡುವೆ
ಹೃದಯದ ಮಿಡಿತಕ್ಕೆ ನಿನ ಮಾತೆ ಭೂಷಣ
ಮೌನದ ಮಾತೇಕೆ ಹೇಳಿ ಹೋಗು ಕಾರಣ...



                                           -- ಶಿವು