Wednesday, 21 October 2015

ಕವನ ಮತ್ತು ಅವಳು

ಬಲ್ಲ ಸ್ನೇಹಿತರೆಲ್ಲ ಮೆಲ್ಲ ಕೇಳುವರು
ಅವಳಿರುವಳೇ  ಇಲ್ಲಿ, ಈ ಕವನದಲ್ಲಿ
ಒಲ್ಲದೇ ಮೋರೆಯ  ಅತ್ತ ಹೊರಳಿಸಿದರು
ಮತ್ತದೇ ಪ್ರಶ್ನೆ
ಅವಳಿರುವಳೇ  ಇಲ್ಲಿ, ಈ ಕವನದಲ್ಲಿ

ಪದದಿ ಹರಿದಿದೆ ಒಲವು, ಎದ್ದು ಕಂಡಿದೆ ನೋವು
ಅವಳಿರುವಳೇ  ಇಲ್ಲಿ, ಈ ಕವನದಲ್ಲಿ
ಏನೋ ಇದೆ ಬದುಕಲ್ಲಿ, ನೀ ಅಡಿಯ ಇಡುವಲ್ಲಿ
ಅವಳಿರುವಳೇ  ಇಲ್ಲಿ, ಈ ಕವನದಲ್ಲಿ

ಯೋಚಿಸಿದೆ ನಾ ನಿಂತು, ಒಡನೆ ನೆನಪಿಗೆ ಬಂತು
ಇದ್ದರೂ ಇರಬಹುದು ನನ್ನ ಪದದಲ್ಲಿ
ಒಲವ ಹುಟ್ಟಿಸಿದವಳು, ಪ್ರೀತಿ ಉಕ್ಕಿಸಿದವಳು
ಇದ್ದರೂ ಇರಬಹುದು, ನನ್ನ ಪದದಲ್ಲಿ

ಸಂದಿಗ್ಧ ಪ್ರಶ್ನೆಯಿದು, ಉತ್ತರವು ಸಿಗದು
ಆದರೂ ಹೇಳುವೆ, ಮರುಪ್ರಶ್ನೆ ಸಲ್ಲದು
ಭಾವನೆಗಳ ಸಮ್ಮಿಳಿತದ ಏರಿಳಿತವೇ ಅವಳು
ಕವನದಲ್ಲಿ ಅವಳಿಲ್ಲ, ಕವನವೇ ಅವಳು
ಕವನದಲ್ಲಿ ಅವಳಿಲ್ಲ, ಕವನವೇ ಅವಳು

                                                --ಶಿವು

No comments:

Post a Comment