Tuesday, 13 October 2015

ದೆವ್ವ

ಎಡವಿದೆನು ತಡರಾತ್ರಿ ಮಾರ್ಗ ಮಧ್ಯದಲಿ
ದೆವ್ವದ ಭಯವಿತ್ತು ದಾರಿಯಲ್ಲಿ
ಕೇಳಿತು ದೂರದಿ ಹೆಣ್ಣೊಂದು ಅತ್ತಂತೆ
ಕೂಗಿತು ನಾಯೊಂದು ಹುಚ್ಚು ಹಿಡಿದಂತೆ...


ಚದುರಿದ ಬೆಳಕಂತೆ ಹೆಣ್ಣೊಂದು ಓಡಿರಲು
ಅಮವಾಸ್ಯೆ ಕತ್ತಲಲಿ ಬಿರುಗಾಳಿ ಬೀಸಿರಲು
ಜನವರಿಯ ಚಳಿಯಲ್ಲು ಬೆವರಿಳಿಯುತಿರಲು
ಮೂಕವೇದನೆಯೊಂದು ಬಾ ಇಲ್ಲಿ ಎನಲು...


ಇಡಿ ಮೈಯು ಕಂಪಿಸಿತು ಮೇಲಿಂದ ಕೆಳಗೆ
ಸಾವೆನ್ನ ಕರೆದಾಗ ಬಾ ಎಂದು ಬಳಿಗೆ
ಮುಕ್ಕೋಟಿ ದೇವರು ಕಣ್ಮುಂದೆ ಬಂದರು
ನನ್ನ ಮೊರೆಯ ಕೇಳುವವರಾರು....?


ಕಣ್ಣು ಕಾಣಿಸದಂತೆ ತರಗೆಲೆಯು ಹಾರಿತ್ತು
ಅತೃಪ್ತ ಆತ್ಮವು ಬಳಿಸಾರಿ ಬಂದಿತ್ತು
ವೇದನೆಯ ರಾಗವು ಕಿವಿಯನ್ನು ತಟ್ಟಿತ್ತು
ಪಿಸುದನಿಯು ಜೋರಾಗಿ ಹೆಸರನ್ನು ಕೂಗಿತ್ತು


ಓಡದೇ ಬೇರೆಯ ಮಾರ್ಗವೇ ಇರಲಿಲ್ಲ
ಚಲಿಸುವ ಶಕ್ತಿಯು ದೇಹದಲ್ಲಿರಲಿಲ್ಲ
ಆಳಕ್ಕೆ ಬಿದ್ದಿರಲು ದುಸ್ವಪ್ನ ಮುಗಿದಿತ್ತು
ಕಣ್ತೆರೆದೆ ಚಡಪಡಿಸಿ ಬೆಳಕು ಹರಿದಿತ್ತು....



                                            -- ಶಿವು

No comments:

Post a Comment